ಹೊಂಬುಜ, ೧೨ನೇ ನವೆಂಬರ್ ೨೦೧೮: ಶ್ರೀ ಕ್ಷೇತ್ರ ಹೊಂಬುಜದ ಪುರಾತನವಾದ ಪಾಳಿ ಅಕ್ಕನ ಬಸದಿಯ ಪುನರ್ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯವನ್ನು ಪರಮ ಪೂಜ್ಯ ಜಗದ್ಗುರು ಡಾ ದೇವೇಂದ್ರಕೀರ್ತಿ ಭಟ್ಟರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನೆರವೇರಿಸಲಾಯಿತು. ’ಭೂಮಿ ಪೂಜೆ’ಯ ವಿಧಿ ವಿಧಾನಗಳನ್ನು ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರದ ಪುರೋಹಿತ ವರ್ಗದವರು ನೆರೆವೇರಿಸಿದರು. ಹೊಂಬುಜ ಜೈನ ಸಮಾಜದ ಶ್ರಾವಕರು ಹಾಗೂ ವಿವಿಧ ಊರುಗಳಿಂದ ಆಗಮಿಸಿದ್ದ ಭಕ್ತರು ಉಪಸ್ಥಿತರಿದ್ದರು.
ಪಾಳಿಅಕ್ಕನ ಬಸದಿಯ ಬಗ್ಗೆ – ಈ ಬಸದಿಯು ಕುಮುದ್ವತಿ ತೀರ್ಥ ಎಂದು ಕರೆಯಲಾಗುವ ಕುಮುದ್ವತಿ ನದಿಯ ಉಗಮ ಸ್ಥಾನಕ್ಕೆ ಹೊಂದಿಕೊಂಡಿದೆ. ಕೇವಲ ಗರ್ಭಗೃಹ ಮಾತ್ರವಿದ್ದ ಈ ಬಸದಿಯ ಮುಂಭಾಗದಲ್ಲಿನ ಶಾಸನ ಹಾಗೂ ಅವಶೇಷಗಳು ಅಲ್ಲಿ ವಿಶಾಲವಾದ ಮುಖಮಂಟಪ ವಿತ್ತೆಂದು ತೋರುತ್ತಿದ್ದವು. ಗರ್ಭಗುಡಿಯಲ್ಲಿ ಭಿನ್ನವಾದ ತೀರ್ಥಂಕರರ ಪದ್ಮಾಸನ ವಿಗ್ರಹವಿದ್ದು ಅದನ್ನು ವಿಕ್ರಮ ಸಾಂತರನ ಎರಡನೆಯ ಪತ್ನಿ ಪಾಳಿಅಕ್ಕ ಮಾಡಿಸಿದ್ದಳು ಎಂದು ಶಾಸನಗಳ ಉಲ್ಲೇಖದಿಂದ ತಿಳಿಯುತ್ತದೆ. ಈ ಬಸದಿಯನ್ನು ಪಟ್ಟಣ ಸ್ವಾಮಿ ನೋಕಯ್ಯ ಶೆಟ್ಟಿ ಎಂಬುವರು ಕ್ರಿ.ಶ.1061ರಲ್ಲಿ, ಕಾರ್ತಿಕ ಮಾಸದ ಐದನೆಯ ಶನಿವಾರದಂದು ಪ್ರತಿಷ್ಠಾಪಿಸಲಾಯಿತು ಎಂಬ ಅಂಶವು ಶಾಸನಗಳಿಂದ ತಿಳಿಯುತ್ತದೆ. ಆದ್ದರಿಂದ ಈ ಬಸದಿಯನ್ನು ’ಪಟ್ಟಣ ಸ್ವಾಮಿ ಜಿನಾಲಯ’ ಎಂದು ಕೂಡ ಕರೆಯಲಾಗುತ್ತದೆ. ಅದಲ್ಲದೆ ಕುಮುದ್ವತಿ ತೀರ್ಥಕ್ಕೆ ಹೊಂದಿಕೊಂಡಂತೆ ಇರುವುದರಿಂದ ಇದನ್ನು ’ತೀರ್ಥದ ಬಸದಿ’ ಎಂದು ಕೂಡ ಕರೆಯುತ್ತಾರೆ.
ಕರ್ಮಧರ್ಮ ಸಮನ್ವಯ – ಕರ್ಮಧರ್ಮ ಸಮನ್ವಯ ವೆಂಬಂತೆ ಈ ಬಸದಿಯ ಪ್ರತಿಷ್ಠಾಪನೆಯು ಕಾರ್ತಿಕ ಮಾಸದಲ್ಲಾಗಿದ್ದು, 957 ವರ್ಷಗಳ ನಂತರ ಅದರ ಪುನರ್ನಿರ್ಮಾಣದ ಭೂಮಿ ಪೂಜೆ ಕಾರ್ಯವು ಮತ್ತೊಮ್ಮೆ ಕಾರ್ತಿಕ ಮಾಸದಲ್ಲೇ ನಡೆಯುತ್ತಿದೆ.
– ಶ್ರೀ ಕ್ಷೇತ್ರ ಹೊಂಬುಜ