ಹೊಂಬುಜ, 9 ಜುಲೈ 2019: ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ “ಚೈತನ್ಯ ಚೂಡಾಮಣಿ” ಉಪಾಧಿಯನ್ನು “ಗುರುವಂದನೆ”ಯಾಗಿ ಹೊಂಬುಜದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸಮರ್ಪಿಸಿದರು. ಶ್ರೀ ಚಾರುಕೀರ್ತಿ ಸ್ವಾಮೀಜಿಯವರು ಶ್ರೀಕ್ಷೇತ್ರ ಶ್ರವಣಬೆಳಗೊಳದ ಭಟ್ಟಾರಕರಾಗಿ 50 ವರ್ಷಗಳನ್ನು ಪೂರೈಸಿದ ಸ್ಮರಣಾರ್ಥವಾಗಿ ಈ ಉಪಾಧಿಯನ್ನು ಸಮರ್ಪಿಸಿದರು. ಇದಕ್ಕೆ ಸಂಬಂಧಿಸಿದಂತೆ ಶ್ರೀ ಪದ್ಮಾವತಿ ಅಮ್ಮನವರ ಬಸದಿಯಲ್ಲಿ ಪುಟ್ಟ ಸುಂದರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಸ್ವಾಮೀಜಿಯವರು 2019ರ ಮಹಾವೀರ ಜಯಂತಿಯಂದು ಶ್ರವಣಬೆಳಗೊಳದ ಭಟ್ಟಾರಕರಾಗಿ 50ವರ್ಷಗಳನ್ನು ಪೂರೈಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಹೊಂಬುಜದ/ಹುಂಚದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಶ್ರೀ ಕ್ಷೇತ್ರ ಹೊಂಬುಜದಲ್ಲಿ ಹಾಗೂ ಅಧೀನ ಕ್ಷೇತ್ರಗಳಾದ ಕುಂದಾದ್ರಿ, ವರಾಂಗ ಮತ್ತು ಹಟ್ಟಿಅಂಗಡಿಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು. ಶ್ರೀ ದೇವೇಂದ್ರಕೀರ್ತಿ ಸ್ವಾಮೀಜಿಯವರ ತ್ಯಾಗಿ ಸೇವೆ – ಜೈನ ಮುನಿ ಮತ್ತು ಮಾತಾಜಿಗಳ ಬಗ್ಗೆ ವಹಿಸುವ ಕಾಳಜಿ ಹಾಗೂ ಗುರುಭಕ್ತಿಯನ್ನು ಕೊಂಡಾಡಿದರು. ನರಸಿಂಹರಾಜಪುರದ ಸ್ವಸ್ರಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
– ಶ್ರೀ ಕ್ಷೇತ್ರ ಹೊಂಬುಜ