ಹೊಂಬುಜದ ಮಾತೃಹೃದಯಿ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ 38ನೇ ಜನ್ಮದಿನದ ಸಂಭ್ರಮ

ಕರೋನಾ ಮಹಾಮಾರಿಯಿಂದ ವಿಶ್ವದಾದ್ಯಂತ ಲಾಕ್‌‌‌ಡೌನ್ ನಿಂದಾಗಿ ಹಲವಾರು ವರ್ಗಗಳ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ, ದುಡಿಮೆ ಇಲ್ಲದೆ ಜನ-ಜನಜೀವನ ಅಸ್ತವ್ಯಸ್ತಗೊಂಡು ಕೋಟ್ಯಾಂತರ ಜನರು ತೊಂದರೆಗೊಳಗಾಗಿ ಅವರ ತುತ್ತು ಅನ್ನಕ್ಕೂ ತೊಂದರೆ ಉಂಟಾಯಿತು. ಕರ್ನಾಟಕದಾದ್ಯಂತ ಸುಮಾರು 1,500 ರಷ್ಟಿರುವ ಜೈನ ಪುರೋಹಿತರು ನಮ್ಮ ಬಸದಿಗಳನ್ನು ತಲೆತಲಾಂತರದಿಂದ ರಕ್ಷಿಸಿಕೊಂಡು ಬಂದು ಜೈನ ಆಚರಣೆಗಳ ಮೂಲಕ ಆಯಾ ಪ್ರದೇಶದಲ್ಲಿ ಜೈನಧರ್ಮದ ರಕ್ಷಣೆಯಲ್ಲಿ ಶತಶತಮಾನಗಳಿಂದ ಮಹತ್ವದ ಪಾತ್ರವನ್ನು ವಹಿಸಿಕೊಂಡು ಬಂದವರು. ಅಂತಹ ಪುರೋಹಿತ ವರ್ಗವೂ ಕೂಡ ಲಾಕ್‍ಡೌನ್‍ನಿಂದಾಗಿ ತೊಂದರೆಗೊಳಗಾಯಿತು. ವಿಶ್ವಕ್ಕೆ ದಾನದ ಪರಿಕಲ್ಪನೆಯನ್ನು ಸಾರಿ ಹೇಳಿದ ಮಹತ್ವದ ದಿನವಾದ ”ಅಕ್ಷಯ ತೃತೀಯ” ದಿನದಂದು ಈ ವರ್ಷ (25 ಏಪ್ರಿಲ್ 2020) ಕರ್ನಾಟಕದ ಜೈನ ಧರ್ಮದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಲಾಯಿತು. ಅಂದು ರಾಜ್ಯದಾದ್ಯಂತ ಜೈನ ಪುರೋಹಿತವರ್ಗಕ್ಕೆ (ಹಾಗೂ ಇನ್ನೂ ಹಲವಾರು ಬಡ ಕುಟುಂಬಗಳಿಗೆ) 500 ರಿಂದ 600 ಆಹಾರದ ಕಿಟ್‌‌ಗಳನ್ನು ವಿತರಿಸಿ ನಂತರದ  ಹಲವಾರು ದಿನಗಳವರೆಗೆ ಕರ್ನಾಟಕದ ಎಲ್ಲ ಜೈನ ಪುರೋಹಿತರಿಗೆ ತಲುಪಿಸಲಾಯಿತು. ಇದನ್ನು ಕಾರ್ಯರೂಪಕ್ಕಿಳಿಸಿ, ಯಶಸ್ವಿಯಾಗಿ ಪೂರ್ಣಗೊಳಿಸಿ, ನಮ್ಮ ಬಸದಿಗಳ ರಕ್ಷಕರಾದ ಪುರೋಹಿತರ ರಕ್ಷಣೆಗೆ ಟೊಂಕಕಟ್ಟಿನಿಂತು, ದಾನದ ಪರಿಕಲ್ಪನೆಗೆ ಹೊಸ ಭಾಷ್ಯವನ್ನು ಬರೆದು ಧರ್ಮರಕ್ಷಕರಾದ ಮಠಾಧೀಶರೊಬ್ಬರು ಧರ್ಮವನ್ನು ಹೀಗೂ ರಕ್ಷಿಸಬಹುದೆಂದು ವಿಶ್ವಕ್ಕೆ ತೋರಿಸಿಕೊಟ್ಟವರು ನಮ್ಮ ಹೊಂಬುಜ ಜೈನಮಠದ ಮಠಾಧೀಶರಾದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರ‍ೀ ಡಾ.ದೇವೇಂದ್ರಕೀರ್ತಿ ಭಟ್ಟಾರ‍ಕ ಸ್ವಾಮೀಜಿಯವರು. ಇದಲ್ಲದೆ 2019ರಲ್ಲಿ ರಾಜ್ಯವನ್ನೇ ತಲ್ಲಣ ಗೊಳಿಸಿದ ಪ್ರವಾಹದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬದುಕು ಕಳೆದು ಕೊಂಡ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳಿಗೆ ಮನೆ ನಿರ್ಮಿಸಲು ಶೀಟ್‍ಗಳನ್ನು ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನದಂತೆ ಶ್ರ‍ೀಮಠದ ವತಿಯಿಂದ ವಿತರಿಸಲಯಿತು.
ಇಂತಹ ದೂರ‍ದೃಷ್ಟಿಯನ್ನು ಹೊಂದಿರುವ, ಜೈನಧರ್ಮದ ರಕ್ಷಣೆಗೆ ಸದಾ ಹಾತೊರೆಯುವ, ಪ್ರಗತಿಪರ ಚಿಂತನೆಯ ನಮ್ಮ ಹೊಂಬುಜದ ಡಾ.ದೇವೇಂದ್ರಕೀರ್ತಿ ಭಟ್ಟಾರ‍ಕ ಸ್ವಾಮೀಜಿಯವರಿಗೆ ಇಂದು (ಜನನ 18 ಮೇ 1982) 38ನೇ ಜನ್ಮದಿನದ ಸಂಭ್ರಮ, ಇವರಿಗೆ 38ನೇ  ಜನ್ಮದಿನದ ಹಾರ್ದಿಕ ಶುಭಾಶಯಗಳು.
2011 ರಲ್ಲಿ ಹೊಂಬುಜ ಜೈನಮಠದ ಭಟ್ಟಾರ‍ಕರಾಗಿ ಪಟ್ಟಾಭಿಷಿಕ್ತರಾದಂದಿನಿಂದ ಶ್ರ‍ೀ ಕ್ಷೇತ್ರ ಹೊಂಬುಜ ಹಾಗೂ ಕ್ಷೇತ್ರದ ಅಧೀನ ಕ್ಷೇತ್ರಗಳಾದ ವರಾಂಗ, ಹಟ್ಟಿಅಂಗಡಿ, ಕುಂದಾದ್ರಿ ಕ್ಷೇತ್ರಗಳಲ್ಲದೆ ಇನ್ನೂ ಹಲವಾರು ಜೈನ ಕ್ಷೇತ್ರಗಳನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿದ್ದಾರೆ. ಇಂತಹ ಮಾತೃಹೃದಯಿ ಮಠಾಧೀಶರನ್ನು ಪಡೆದದ್ದು ಜೈನ ಸಮಾಜದ ಸೌಭಾಗ್ಯ. ಇವರ ಮಾರ್ಗದರ್ಶನದಲ್ಲಿ ಜೈನ ಸಮಾಜವು ಇನ್ನಷ್ಟು ಪ್ರಗತಿ ಸಾದಿಸಲಿ ಎಂದು ಜೈನ್‌‌‍ಹೆರಿಟೇಜ್‍ಸೆಂಟರ್ಸ್.ಕಾಂ ತಂಡದಿಂದ ಶುಭ ಆಶಯಗಳು.
– ಹೆಚ್.ಪಿ.ನಿತಿನ್
ಕಾರ್ಯನಿರ್ವಾಹಕ ನಿರ್ದೇಶಕರು, ಜೈನ್‌‌‍ಹೆರಿಟೇಜ್‍ಸೆಂಟರ್ಸ್.ಕಾಂ